Releases

ರಾಗತರಂಗಿಣೀ

ಶಾಸ್ತ್ರೀಯ ಸಂಗೀತದ ಹುಟ್ಟು, ಬೆಳವಣಿಗೆ:

ಭಾರತದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ತನ್ನದೇ ಆದ ಸ್ಥಾನ ಇದೆ. ಶಾಸ್ತ್ರೀಯ ಸಂಗೀತ ವೇದಗಳಿಂದ ಹುಟ್ಟಿತು ಎಂದು ಹೇಳಲಾಗುತ್ತದೆ. ವೇದದಲ್ಲಿರುವ ಉದಾತ್ತ, ಅನುದಾತ್ತ, ಸ್ವರಿತಗಳೇ ಮುಂದೆ ಸಂಗೀತದ ಸಪ್ತ ಸ್ವರಗಳಿಗೆ ಕಾರಣವಾದವು ಎನ್ನಲಾಗುತ್ತದೆ. ಇದು ಕಾಲ ಕಳೆದಂತೆ ನಾದೋಪಾಸನೆಯ ರೂಪ ಪಡೆಯಿತು. ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ಹೆಚ್ಚಾಗಿ ದೇವಾಲಯಗಳು ಕಾರಣ ಎನ್ನಬಹುದು. ನಂತರದ ದಿನಗಳಲ್ಲಿ ರಾಜರ ಆಸ್ಥಾನಗಳಲ್ಲಿ ಶಾಸ್ತ್ರೀಯ ಸಂಗೀತ ವಿಜೃಂಭಿಸಿತು. ಆದರೆ ಶಾಸ್ತ್ರೀಯ ಸಂಗೀತ ಅರಮನೆಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅದು ಎಲ್ಲೆಡೆ ಹಬ್ಬಿ ಜನ ಮನದಲ್ಲಿ ನೆಲೆ ನಿಂತಿತು. ನಿಧಾನವಾಗಿ ಇದರಿಂದ ಜಾನಪದ ಗೀತೆ, ಸುಗಮ ಸಂಗೀತ ಮುಂತಾದ ಹತ್ತು ಹಲವಾರು ರೂಪಾಂತರಗಳಾದವು. ಕಾಲಕಳೆದಂತೆ ಉತ್ತರ ಭಾರತದಲ್ಲಿ ಪರ್ಷಿಯನ್ನರ ಪ್ರಭಾವದಿಂದಾಗಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ರೂಪುಗೊಂಡಿತು. ಅನೇಕ ರಾಜರ ಉತ್ತೇಜನದಿಂದ ಶಾಸ್ತ್ರೀಯ ಸಂಗೀತವು ಪ್ರಖ್ಯಾತವಾಯಿತು. ಅನೇಕ ವಾಗ್ಗೇಯಕಾರರು ವಿಶಿಷ್ಟ ರಚನೆಗಳನ್ನು ಮಾಡಿ ಶಾಸ್ತ್ರೀಯ ಸಂಗೀತಕ್ಕೆ ಹೊಸ ಆಯಾಮ ನೀಡಿದರು. ಇವರೆಲ್ಲರ ರಚನೆಗಳು ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಡಿ ಜನಪ್ರಿಯವಾದವು. ದೇವಾಲಯಗಳು, ಅರಮನೆಗಳಲ್ಲಲ್ಲದೆ ನಗರಗಳಲ್ಲಿ ಸಂಗೀತ ಕಛೇರಿಗಳು ಏರ್ಪಾಡಾದವು. ಸಂಗೀತಗಾರರ ಸುಶ್ರಾವ್ಯ ಸಂಗೀತವು ಹೆಚ್ಚು ಹೆಚ್ಚು ಜನಸಾಮಾನ್ಯರಿಗೆ ತಲುಪಿತು. ಕಾಲ ಕ್ರಮೇಣ ಶಾಸ್ತ್ರೀಯ ಸಂಗೀತ ಎಷ್ಟು ಜನಪ್ರಿಯವಾಯಿತೆಂದರೆ “ಸಾಹಿತ್ಯ ಸಂಗೀತ ಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಛ ವಿಷಾಣ ಹೀನಃ”-ಸುಭಾಷಿತ ಅಂದರೆ, ಸಾಹಿತ್ಯ, ಸಂಗೀತ ಅಥವಾ ಕಲೆಯಲ್ಲಿ ಅಭಿರುಚಿ ಹೊಂದಿರದ ಮನುಷ್ಯ ಕೋಡು-ಬಾಲ ಇಲ್ಲದ ಪಶುವಿನಂತೆ.

ರಾಗತರಂಗಿಣೀಯ ಧ್ಯೇಯೋದ್ದೇಶಗಳು:

ಕಲೆ ಎನ್ನುವುದು ಸಮಾಜದ ಅನುಭವಗಳನ್ನು ಪ್ರತಿಬಿಂಬಿಸುವ ಮಾಧ್ಯಮ. ಹಾಗಾಗಿ, ಕಾಲ ಕಳೆದಂತೆ ಎಲ್ಲ ಕಲೆಗಳಂತೆ ಶಾಸ್ತ್ರೀಯ ಸಂಗೀತ ಕೂಡ ಹತ್ತು ಹಲವು ಮಾರ್ಪಾಡುಗಳನ್ನು ಕಂಡಿದೆ. ಉದಾಹರಣೆಗೆ ಸುಮಾರು ೪೦ ವರ್ಷಗಳ ಹಿಂದಿನವರೆಗೂ ಮುಸ್ಸಂಜೆಯಿಂದ ಮುಂಜಾವಿನವರೆಗೆ ನಡೆಯುತ್ತಿದ್ದ ಕಛೇರಿಗಳು ಈಗ ಕೆಲವು ಗಂಟೆಗಳಿಗಷ್ಟೇ ಸೀಮಿತಗೊಂಡಿವೆ. ಅಲ್ಲದೆ ಕಳೆದ ಶತಮಾನಗಳಲ್ಲಿ ಅನೇಕ ವಾಗ್ಗೇಯಕಾರರು ರಚಿಸಿದ್ದ ಹಲವಾರು ಅಪರೂಪದ ರಚನೆಗಳು, ಕೃತಿಗಳು ಮೂಲೆಗುಂಪಾಗಿವೆ. ಇಂದಿನ ಬಿಡುವಿಲ್ಲದ ಜೀವನದಿಂದ ಜನ ಹತ್ತು ಹಲವು ತೊಂದರೆಗಳನ್ನೆದುರಿಸುತ್ತಿದ್ದಾರೆ. ದೈಹಿಕ ಹಾಗೂ ಮಾನಸಿಕ ರೋಗಗಳು ಸರ್ವೇ ಸಾಮಾನ್ಯವಾಗಿವೆ. ಇತ್ತೀಚೆಗೆ ನಡೆದಿರುವ ಸಂಶೋಧನೆಗಳು ಶಾಸ್ತ್ರೀಯ ಸಂಗೀತ ಕೇಳುವುದರಿಂದ ಬಹಳಷ್ಟು ದೈಹಿಕ ಮತ್ತು ಮಾನಸಿಕ ಖಾಯಿಲೆಗಳು ಗುಣವಾಗುವ ಸಾಧ್ಯತೆಗಳನ್ನು ಸೂಚಿಸಿವೆ. ಆದ್ದರಿಂದ ಈಗ ಪ್ರಚಲಿತದಲ್ಲಿರುವ ಸಂಗೀತದ ರಚನೆಗಳನ್ನು ದಾಖಲಿಸಿ ಉಳಿಸುವುದು, ಮುಂದಿನ ಪೀಳಿಗೆಗೆ ತಲುಪುವಂತೆ ನೋಡಿಕೊಳ್ಳುವುದರ ಜೊತೆಗೆ, ಮೂಲೆಗುಂಪಾಗಿರುವ ಶ್ರೇಷ್ಠ ಹಾಗೂ ಅಪರೂಪದ ರಚನೆಗಳನ್ನು ಬೆಳಕಿಗೆ ತಂದು, ದಾಖಲಿಸಿ, ಡಿಜಿಟಲ್ ಮಾಧ್ಯಮಕ್ಕೆ ಅಳವಡಿಸಿ ಇಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಗುರಿ. ಏಕೆಂದರೆ ಶಾಸ್ತ್ರೀಯ ಸಂಗೀತ ಅನೇಕ ಹಿರಿಯ ವಾಗ್ಗೇಯಕಾರರ, ಸಂಗೀತಗಾರರ ಬಹು ದಿನಗಳ ಪರಿಶ್ರಮ, ಸಾಧನೆಯ ಬುನಾದಿಯ ಮೇಲೆ ನಿರ್ಮಿತವಾಗಿದೆ. ಈ ಬುನಾದಿಯನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ. ಕಾಲದ ಹೊಡೆತಕ್ಕೆ ಸಿಲುಕಿ ಕಣ್ಮರೆಯಾಗುತ್ತಿರುವ ಸಂಗೀತದ ಅಪರಿಮಿತ ಸಂಪತ್ತನ್ನು ಅಗೆದು ಹುಡುಕಿ, ದಾಖಲಿಸಿ, ಅದರ ಸೊಗಡನ್ನು ಎಲ್ಲೆಡೆ ಪಸರಿಸುವಂತೆ ಮಾಡುವ ಉದ್ದೇಶವನ್ನು ಹೊಂದಿದ್ದ ನಾವು ಶೃಂಗೇರೀ ಶ್ರೀಶಾರದಾಪೀಠಾಧೀಶ್ವರರಾದ ಅನಂತಶ್ರೀ ವಿಭೂಷಿತ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ದರ್ಶನವನ್ನು ಸ್ವಸ್ತಿ ಶ್ರೀ ಶೋಭಕೃನ್ನಾಮ ಸಂವತ್ಸರದ ಜ್ಯೇಷ್ಠ ಕೃಷ್ಣ ಅಷ್ಟಮಿಯಂದು (11-06-2023) ಪಡೆದು ನಮ್ಮ ಇಂಗಿತವನ್ನು ಬಿನ್ನವಿಸಿಕೊಂಡು, ಅವರ ಕೃಪಾಶೀರ್ವಾದವನ್ನು ಕೋರಿದಾಗ, ಅವರು ‘ರಾಗತರಂಗಿಣೀ’ ಎಂಬ ಹೆಸರನ್ನು ಅನುಗ್ರಹಿಸಿ, ಆಶೀರ್ವದಿಸಿದರು. ಮಹಾಮಹಿಮರ ಆಶೀರ್ವಾದದಿಂದ ನಮ್ಮಲ್ಲಿ ಹೊಸ ಸ್ಫೂರ್ತಿ, ಹುಮ್ಮಸ್ಸು ತುಂಬಿದೆ. ಮುಂದಿನ ದಿನಗಳಲ್ಲಿ ನಾವು ಅನೇಕ ಯೋಜನೆಗಳನ್ನು ಕೈಗೊಳ್ಳಲಿದ್ದೇವೆ. ಅವುಗಳಲ್ಲಿ ಮುಖ್ಯವಾದ ಯೋಜನೆಗಳೆಂದರೆ, ಕಣ್ಮರೆಯಾಗಿರುವ ರಚನೆಗಳು ಮತ್ತು ರಚನಕಾರರ ಬಗ್ಗೆ ಇಂದಿನ ಪೀಳಿಗೆಗೆ ಅರ್ಥವಾಗುವ ರೀತಿಯಲ್ಲಿ ಕಥಾನಕಗಳ ಮೂಲಕ ವಿವರಿಸಿ, ಸಂಗೀತಗಾರರಿಂದ ಹಾಡಿಸಿ, ಡಿಜಿಟಲ್ ಮಾಧ್ಯಮಕ್ಕೆ ಅಳವಡಿಸುವುದು ನಮ್ಮ ಧ್ಯೇಯ. ನಮ್ಮ ತಂಡದಲ್ಲಿ ವಿವಿಧ ಸಂಗೀತದ ಅಭಿಮಾನಿಗಳು, ಕಲಾರಸಿಕರು ಹಾಗೂ ಸೂಕ್ಷ್ಮ ವಿಮರ್ಶಕ ದೃಷ್ಟಿ ಹೊಂದಿರುವ ಅಭಿಜ್ಞರಿದ್ದಾರೆ. ಈ ಮಹತ್ ಕಾರ್ಯಕ್ಕೆ ಅನುವಾಗಲು ಅನೇಕ ಪ್ರತಿಭಾವಂತ ಗಾನವಿಶಾರದರು ಸಹಕರಿಸುತ್ತಿರುವುದು ನಮ್ಮ ಪುಣ್ಯವೇ ಸರಿ.

Contact Us

Address

No 24 Annapoorna 2nd Main 2nd Cross Vivekanandanagar, Behind Khadi commission Layout, Bangalore - 560085

Phone Number

+91 8904890508